Monday, March 19, 2012

ಬಾಗಿಲೊಳು ಕೈಮುಗಿದು...

ಬಾಗಿಲೊಳು ಕೈಮುಗಿದು
  ಒಳಗೆ ಬಾ ಯಾತ್ರಿಕನೆ
ಶಿಲೆಯಲ್ಲವೀ ಗುಡಿಯು
ಕಲೆಯ ಬಲೆಯು 



 ಕಂಬನಿಯ ಮಾಲೆಯನು
ಎದೆಯ ಬಟ್ಟಲೊಳಿಟ್ಟು
ಧನ್ಯತೆಯ ಕುಸುಮಗಳ
ಅರ್ಪಿಸಿಲ್ಲಿ
 
ಗಂಟೆಗಳ ದನಿಯಿಲ್ಲ
ಜಾಗಟೆಗಳಿಲ್ಲಿಲ್ಲ 
 ಕರ್ಪೂರದಾರತಿಯ
ಜ್ಯೋತಿಯಿಲ್ಲ 
 ಭಗವಂತನಾನಂದ ರೂಪಗೊಂಡಿಹುದಿಲ್ಲಿ 
 ರಸಿಕತೆಯ ಕಡಲುಕ್ಕಿ ಹರಿವುದಿಲ್ಲಿ

ಸರಸದಿಂದುಲಿಯುತಿದೆ ಶಿಲೆಯು ರಾಮಾಯಣವನಿಲ್ಲಿ
ಬಾದರಾಯಣನಂತೆ ಭಾರತವು ಹಾಡುತಿಹುದಿಲ್ಲಿ
ಕುಶಲತೆಗೆ ಬೆರಗಾಗಿ ಮೂಕವಾಗಿದೆ ಕಾಲವಿಲ್ಲಿ
ಮೂರ್ಛೆಯಲಿ ಮೈಮರೆತು ತೇಲುವುದು ಭೂಭಾರವಿಲ್ಲಿ
- ಕುವೆಂಪು
 


 

Saturday, March 10, 2012


                 ರಸಋಷಿಗೆ ನಮನ !    
 
ಕುವೆ೦ಪು ಅವರ "ಮಲೆನಾಡಿನ ಚಿತ್ರಗಳು" ಪುಸ್ತಕ ಓದಿದಂದಿನಿಂದ ನಾನು ಅವರ ಫ್ಯಾನ್ :)
ಮಲೆಗಳಲ್ಲಿ ಮದುಮಗಳು  ಕಾದಂಬರಿಯನ್ನು ಮತ್ತೊಮ್ಮೆ ಓದುವ ಆಸೆ ಬಹಳ ಕಾಡ್ತಾ ಇತ್ತು.. ಇವತ್ತು ಶುರು ಮಾಡಿದೀನಿ ಮತ್ತೊಂದ್ ಸಾರ್ತಿ ಓದಕೆ.. ಮೊದಲನೇ ಪುಟದಲ್ಲಿ ಓದುಗರಿಗೆ ಕೊಟ್ಟಿರುವ ಈ ಸಂದೇಶ, ಎಂಥ ಅರ್ಥಪೂರ್ಣ! ಮಲೆನಾಡಿನ ಬದುಕನ್ನು ಬಿ೦ಬಿಸುವ ಈ ಪುಟ್ಟ ಕವನವನ್ನ ಹಂಚಿಕೊಳ್ಳೋ ಆಸೆ ಆಯ್ತು.. ಓದಿ, ಆನ೦ದಿಸಿ ;)

ಇಲ್ಲಿ
        ಯಾರೂ ಮುಖ್ಯರಲ್ಲ;
                ಯಾರೂ ಅಮುಖ್ಯರಲ್ಲ;
                        ಯಾವುದೂ ಯಃಕಶ್ಚಿತವಲ್ಲ!

ಇಲ್ಲಿ
        ಯಾವುದಕ್ಕೂ ಮೊದಲಿಲ್ಲ;
                ಯಾವುದಕ್ಕೂ ತುದಿಯಿಲ್ಲ;
                        ಯಾವುದೂ ಎಲ್ಲಿಯೂ ನಿಲ್ಲುವುದೂ ಇಲ್ಲ;
                                ಕೊನೆಮುಟ್ಟುವುದೂ ಇಲ್ಲ !


ಇಲ್ಲಿ
        ಅವಸರವೂ ಸಾವಧಾನದ ಬೆನ್ನೇರಿದೆ!

ಇಲ್ಲಿ
        ಎಲ್ಲಕ್ಕೂ ಇದೆ ಅರ್ಥ;
                ಯವುದೂ ಇಲ್ಲ ವ್ಯರ್ಥ;
                        ನೀರೆಲ್ಲವೂ ತೀರ್ಥ !!