ಹಾವಿನ ಹಬ್ಬದಿಂದ ಗೋವಿನ ಹಬ್ಬದವರೆಗೂ ಎಲ್ಲ ಹಬ್ಬಗಳೂ ಮುಗಿದಿದೆ .
ನಿರಂತರವಾಗಿ ಭೋರ್ಗರೆದ ಮಳೆ ಕೊನೆಗೂ ತಣ್ಣಗಾಗಿ ಚಳಿಗೆ ಸ್ವಾಗತ ಕೋರಿದೆ .
ಮುಸ್ಸಂಜೆಗೇ ಬೆಳಕು ಮಾಯವಾಗಿ ಮಸೀಮಯ ಕತ್ತಲು ಎಲ್ಲೆಡೆ ತುಂಬುತ್ತಿದೆ .
ಕಾರ್ತೀಕದ ದೀಪಗಳ ಸಾಲು ನಿಶೆಯಲ್ಲಿ ರಾರಾಜಿಸುತ್ತಿದೆ .
ಅಂಗಳದಲ್ಲಿ ಅಡಿಕೆ ಕೊನೆಗಳು ರಾಶಿ-ರಾಶಿಯಾಗಿ ಬಿದ್ದಿವೆ .
ತಣ್ಣನೆ ಮೈಕೊರೆಯುವ ಗಾಳಿ ಲಾಲಿ ಹಾಡಿದೆ .
ಮುಂಜಾನೆಯ ಕೋಲು ಬಿಸಿಲು ಕಾವಣದ ಕಡಲಿನ್ನು ತೂರಿ ಬಂದಿದೆ .
ಚಪ್ಪರದ ಕೆಳಗೆ ನೆರಳು-ಬೆಳಕುಗಳ ರಂಗೋಲಿ ಮೂಡಿದೆ .
ಬದಲಾಗುವ ಋತುಗಳು ನಮ್ಮ ಕೆಲಸವನ್ನು , ನಮ್ಮ ಜೀವನಶೈಲಿಯನ್ನು ಬದಲಾಯಿಸದಷ್ಟು ಮುಂದೆ ಬಂದಿದ್ದರೂ , ಪ್ರಕೃತಿಯ ಋತುಚಕ್ರ ಸಾರ್ವಕಾಲಿಕ ಸತ್ಯ !
ಜೀವನದ ಈ ಮಹಾಪ್ರವಾಹದಲ್ಲಿ ಅವಸರದಲ್ಲಿ ಮುನ್ನುಗ್ಗುತ್ತಿರುವ ವೇಗದಲ್ಲಿ
ನಮ್ಮೊಂದಿಗೆ ಇರುವುದನ್ನು ಮರೆಯುತ್ತಿದ್ದೇವೆ . ಇರುವಲ್ಲೇ ಮುಳುಗಿ-ತೇಲಿ ಹಾಯಾಗಿ
ಸಾಗೋಣ .
ನಿಧಾನಿಸೋಣ . ಸಾವಧಾನದ ಬೆನ್ನೇರೊಣ .
ಕೊನೆಗೆ ಸೇರುವ ಕಡಲೊಂದೇ ತಾನೇ ?